ಪ್ರತಿಭೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಅದನ್ನು ಗುರುತಿಸಿ, ವೇದಿಕೆಯನ್ನು ಕಲ್ಪಿಸಿಕೊಟ್ಟರೆ ಅದು ಪ್ರಪಂಚಕ್ಕೆ ಪರಿಚಯವಾಗುವುದು. ಕೆಲವೊಮ್ಮೆ ಅವಕಾಶಗಳು ದೊರೆಯದೆ ಪ್ರತಿಭೆಯನ್ನು ಪರಿಚಯಿಸಲು ಸಾಧ್ಯವಾಗದೆ ಇರಬಹುದು. ಆದರೂ ನಮ್ಮ ಪ್ರಯತ್ನಗಳು ಹಾಗೂ ಕಲಿಕೆಯು ಮುಂದುವರಿಯುತ್ತಲೇ ಇದ್ದಾಗ ಖಂಡಿತವಾಗಿಯೂ ಪ್ರಸಿದ್ಧಿಯನ್ನು ಪಡೆಯಬಹುದು. ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣವು ಬಹುತೇಕ ಮಂದಿಗೆ ಚಿರಪರಿಚಿತವಾಗಿದೆ. ಮಾಧ್ಯಮದ ಮೂಲಕವೇ ಎಷ್ಟೋ ಜನರು ತಮ್ಮ ಭಾವನೆಗಳನ್ನು ಪ್ರತಿಭೆಗಳನ್ನು ಪರಿಚಯಿಸುತ್ತಿರುತ್ತಾರೆ. ಈ ರೀತಿಯಲ್ಲೇ ಒಬ್ಬ ಮಹಿಳೆ ಇತ್ತೀಚೆಗೆ ಬಹಳ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾಳೆ. ಹೌದು, ಗಂಗಮ್ಮಾ ಎನ್ನುವವರು ತಾವು ಹಾಡಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದರ ಫಲಿತಾಂಶ ಏನಾಗಬಹುದು ಎನ್ನುವುದನ್ನು ಅವರು ಅಂದಾಜಿಸಿರಲು ಸಾಧ್ಯವಿಲ್ಲ. ಅಂತಹ ಒಂದು ಫಲಿತಾಂಶ ದೊರೆಯಿತು. ಗಂಗಮ್ಮಾ ಅವರು ಕೊಪ್ಪಳದ ಒಂದು ಚಿಕ್ಕ ಹಳ್ಳಿಯಿಂದ ಬಂದವರು. ರೈತಾಪಿ ಕುಟುಂಬದಿಂದ ಬಂದ ಇವರು 5ನೇ ತರಗತಿಯ ವರೆಗೆ ಓದಿದ್ದಾರೆ. ಇವರು 9 ಜನ ಒಡಹುಟ್ಟಿದವರೊಂದಿಗೆ ಬೆಳೆದು ಬಂದಿದ್ದಾರೆ. ಇವರು ತನ್ನ ವಿದ್ಯಾಭ್ಯಾಸವನ್ನು 5ನೇ ತರಗತಿಗೆ ನಿಲ್ಲಿಸಿದ್ದಾರಾದರೂ ಕನ್ನಡ, ಹಿಂದಿ, ತೆಲಗು ಹಾಡನ್ನು ಬರೆಯಬಲ್ಲರು. ಜೊತೆಗೆ ಚೆನ್ನಾಗಿ ಹಾಡುತ್ತಾರೆ.